ಭಾರತದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್‌ ಉಳಿತಾಯ ಖಾತೆಗಳ ಮೇಲಿನ ಮಿನಿಮಮ್ ಬ್ಯಾಲೆನ್ಸ್ ಅನ್ನು ಭಾರೀ ಏರಿಕೆ ಮಾಡಿದೆ. ಮೆಟ್ರೋ ಹಾಗೂ ನಗರದ ಪ್ರದೇಶಗಳಿಗೆ ಬರೋಬ್ಬರಿ 50,000 ರೂಪಾಯಿ ಒಂದೇ ಬಾರಿಗೆ ಹೆಚ್ಚಿಸಿದೆ. ಈ ಹಿಂದೆ ಇದ್ದಿದ್ದು 10,000 ರೂಪಾಯಿ!

ಭಾರತದ 2ನೇ ಅತಿ ದೊಡ್ಡ ಖಾಸಗಿ ಬ್ಯಾಂಕ್‌ ಆಗಿ ಗುರುತಿಸಿಕೊಂಡಿರುವ ಐಸಿಐಸಿಐ ಬ್ಯಾಂಕ್, ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ಸೇವಿಂಗ್ಸ್‌ ಅಕೌಂಟ್‌ಗೆ ಕನಿಷ್ಠ ಮಾಸಿಕ ಸರಾಸರಿ ಬ್ಯಾಲೆನ್ಸ್ (MAB) ಅನ್ನು 50,000 ರೂ.ಗೆ ಹೆಚ್ಚಿಸಿದೆ. ಈ ಮೂಲಕ ಒಂದೇ ಬಾರಿಗೆ ಐದು ಪಟ್ಟು ಹೆಚ್ಚಳದ ಮೂಲಕ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಈ ಹಿಂದೆ ಕನಿಷ್ಠ ಮಾಸಿಕ ಸರಾಸರಿ ಬ್ಯಾಲೆನ್ಸ್‌ 10,000 ರೂ. ಆಗಿತ್ತು. 2015ರಿಂದ ಇದೇ ಜಾರಿಯಲ್ಲಿತ್ತು. ಆದ್ರೆ ಇದೀಗ ಒಮ್ಮೆಲೆ ಐದು ಪಟ್ಟು ಹೆಚ್ಚಿಸಿದೆ.

ಹೊಸ ಅಕೌಂಟ್‌ಗಳಿಗೆ ಈ ನಿಯಮ ಅನ್ವಯ!

ಹೌದು, ಆಗಸ್ಟ್‌ 1ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಹಾಲಿ ಗ್ರಾಹಕರಿಗೆ ಈ ನಿಯಮಗಳು ಅನ್ವಯವಾಗಲ್ಲ. ಅವರು ಈಗಿರುವ 10,000 ರೂಪಾಯಿ ಮಿನಿಮಮ್ ಬ್ಯಾಲೆನ್ಸ್‌ನಲ್ಲೇ ಮುಂದುವರೆಯಬಹುದಾಗಿದೆ. ಆದ್ರೆ ಆಗಸ್ಟ್‌ 1, 2025ರಿಂದ ಹೊಸ ಅಕೌಂಟ್‌ ತೆರೆದಿರುವ ಗ್ರಾಹಕರು ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ 50,000 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಹೊಂದಿರಬೇಕು.

ಹೀಗಾಗಿ ಇನ್ಮುಂದೆ ಐಸಿಐಸಿಐ ಬ್ಯಾಂಕ್‌ನಲ್ಲಿ ಅಕೌಂಟ್‌ ತೆರೆಯಲಿರುವ ಎಲ್ಲಾ ಗ್ರಾಹಕರಿಗೂ ಈ ನಿಯಮಗಳು ಅನ್ವಯವಾಗಲಿವೆ. ಬ್ಯಾಂಕ್‌ನಲ್ಲಿ ತೆರೆದಿರುವ ಸ್ಯಾಲರಿ ಅಕೌಂಟ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಐಸಿಐಸಿಐ ಬ್ಯಾಂಕ್‌ ಹೇಳಿದೆ. ಸ್ಯಾಲರಿ ಅಕೌಂಟ್‌ಗಳಿಗೆ ಬ್ಯಾಂಕ್‌ ಪ್ರತ್ಯೇಕ ನಿಯಮ ಹೊಂದಿದೆ.

ಐಸಿಐಸಿಐ ಬ್ಯಾಂಕ್‌ನಿಂದ ಹೊಸ ಬೆಂಚ್‌ಮಾರ್ಕ್‌

ಹೌದು, ಐಸಿಐಸಿಐ ಬ್ಯಾಂಕ್ 50,000 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಹೆಚ್ಚಳದ ಮೂಲಕ ಬ್ಯಾಂಕಿಂಗ್ ವಲಯದಲ್ಲಿ ಹೊಸ ಬೆಂಚ್‌ಮಾರ್ಕ್ ಸೆಟ್ ಮಾಡಿದೆ. ಹೀಗೆ ದಿಢೀರ್ 50,000 ರೂಪಾಯಿಗೆ MAB ಹೆಚ್ಚಳ ಮಾಡಿರುವುದು ನೋಡಿದ್ರೆ, ಖಾಸಗಿ ಸಾಲದಾತ ಹೆಚ್ಚಿನ ಮೌಲ್ಯದ ಗ್ರಾಹಕರನ್ನೇ ಗುರಿಯಾಗಿಸಿಕೊಂಡಂತಿದೆ. ಅಲ್ಲದೆ ಭವಿಷ್ಯದಲ್ಲಿ ಕಡಿಮೆ ವಹಿವಾಟು ನಡೆಸುವ, ಸಣ್ಣ ಪುಟ್ಟ ಗ್ರಾಹಕರು ನಮಗೆ ಬೇಡ ಎಂಬ ಸಂದೇಶವನ್ನು ಈ ಮೂಲಕ ನೀಡಿದೆ.

ಸೇವಾ ಶುಲ್ಕಗಳೂ ಏರಿಕೆ!

ಆಗಸ್ಟ್ 1 ರಿಂದ ಬ್ಯಾಂಕಿನ ಸೇವಾ ಶುಲ್ಕಗಳನ್ನೂ ಹೆಚ್ಚಳ ಮಾಡಲಾಗಿದೆ. ಇದರ ಪ್ರಕಾರ ಅರೆ ನಗರ ಪ್ರದೇಶಗಳಿಗೆ ಹೊಸ ಕನಿಷ್ಠ ಮಾಸಿಕ ಬ್ಯಾಲೆನ್ಸ್‌ 25,000 ರೂ. ಆಗಿದ್ದು, ಗ್ರಾಮೀಣ ಖಾತೆಗಳಿಗೆ 10,000 ಮಾಸಿಕ ಬ್ಯಾಲೆನ್ಸ್‌ ಅನ್ನು ಕಾಯ್ದುಕೊಳ್ಳಲೇಬೇಕಿದೆ. ಕನಿಷ್ಠ ಮಾಸಿಕ ಬ್ಯಾಲೆನ್ಸ್‌ ಅನ್ನು ಕಾಯ್ದುಕೊಳ್ಳಲು ವಿಫಲವಾದ ಗ್ರಾಹಕರು, ಕಡಿಮೆ ಇರುವ ಮೊತ್ತದ ಶೇ. 6ರಷ್ಟು ಅಥವಾ 500 ರೂ., ಇದರಲ್ಲಿ ಯಾವುದು ಕಡಿಮೆಯೋ ಅದನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.

ಹೀಗಿದ್ದೂ ಪಿಂಚಣಿದಾರರಿಗೆ ಈ ದಂಡದಿಂದ ವಿನಾಯಿತಿ ನೀಡಲಾಗಿದೆ ಎಂದು ಐಸಿಐಸಿಐ ಬ್ಯಾಂಕ್‌ ವಿವರ ನೀಡಿದೆ.

ಐಸಿಐಸಿಐ ಬ್ಯಾಂಕ್ ವಹಿವಾಟಿಗೂ ಮಿತಿ!

ಉಳಿತಾಯ ಖಾತೆದಾರರಿಗೆ ನಗದು ವಹಿವಾಟಿನ ಮೇಲೆಯೂ ಬ್ಯಾಂಕ್‌ ನಿರ್ಬಂಧ ಹೇರಿದೆ. ಗ್ರಾಹಕರು ಐಸಿಐಸಿಐ ಬ್ಯಾಂಕ್ ಶಾಖೆಗಳಲ್ಲಿ ತಿಂಗಳಿಗೆ 3 ಉಚಿತ ನಗದು ಠೇವಣಿ ಅಥವಾ ಹಿಂಪಡೆಯುವಿಕೆಗೆ ಅರ್ಹರಾಗಿರುತ್ತಾರೆ. ಅಷ್ಟೇ ಅಲ್ಲ ಠೇವಣಿ ಮತ್ತು ಹಿಂಪಡೆಯುವಿಕೆ ಎರಡರಲ್ಲೂ ತಿಂಗಳಿಗೆ ಗರಿಷ್ಠ 1 ಲಕ್ಷ ರೂ. ಮೊತ್ತದ ವಹಿವಾಟನ್ನಷ್ಟೇ ಮಾಡಬಹುದು.
ಗ್ರಾಹಕರ ಮೂರು ವಹಿವಾಟು ಅಥವಾ 1 ಲಕ್ಷ ರೂ. ಮೌಲ್ಯದ ಮಿತಿಯನ್ನು ಮೀರಿದಲ್ಲಿ ಶುಲ್ಕಗಳು ಪ್ರಾರಂಭವಾಗುತ್ತವೆ. ಈ ಶುಲ್ಕಗಳು ಪ್ರತಿ ವಹಿವಾಟಿಗೆ 150 ರೂ. ಅಥವಾ 1,000 ರೂ. ವಹಿವಾಟಿಗೆ 3.50 ರೂ., ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ಬ್ಯಾಂಕ್‌ ವಿಧಿಸುತ್ತದೆ.

ಒಂದೊಮ್ಮೆ ಮೊತ್ತ ಹಾಗೂ ವಹಿವಾಟಿನ ಸಂಖ್ಯೆ ಎರಡನ್ನೂ ಮೀರಿದಲ್ಲಿ, ಅನ್ವಯವಾಗುವ ಎರಡು ಶುಲ್ಕಗಳಲ್ಲಿ ಹೆಚ್ಚಿನದು ಯಾವುದೋ ಅದನ್ನು ಬ್ಯಾಂಕ್‌ ಅನ್ವಯಿಸುತ್ತದೆ.

Leave a Reply

Your email address will not be published. Required fields are marked *